ಪೀಸಾರೋ, ಕ್ಯಾಮೀ
1830-1903. ಫ್ರೆಂಚ್ ಪುನರುಜ್ಜೀವನ ಸಂಪ್ರದಾಯ ಕಲೆಯ ಸಮಷ್ಟಿ ಪರಿಣಾಮ ಪದ್ಧತಿ ಪಂಥದ ಪಿತಾಮಹ, ಪ್ರಖ್ಯಾತ ಕಲಾವಿದನಾದ ಈತ ಧರ್ಮಿಷ್ಟ, ದಯಾವಂತ, ಸೂಕ್ಷ್ಮ ಮನಸ್ಸಿನವ, ನಿಃಸ್ವಾರ್ಥಿ. ಹುಟ್ಟಿದ್ದು ವರ್ಜಿನ್ ನಡುಗಡ್ಡೆಗಳಲ್ಲಿನ ಸೇಂಟ್ ಥಾಮಸ್ ಎಂಬಲ್ಲಿ. ಸಾಮಾನ್ಯ ಶಿಕ್ಷಣ ಮುಗಿಸಿ ತಂದೆಯ ಒಣಸಾಮಾನಿನ ಅಂಗಡಿಯಲ್ಲಿ ಸಹಾಯ ಮಾಡುತ್ತ ತನಗೆ ಲಭ್ಯವಾದ ಸಮಯದಲ್ಲಿ ಚಿತ್ರಗಳನ್ನು ರಚಿಸುತ್ತಿದ್ದ.

ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ಕಲಾ ವ್ಯಾಸಂಗ ಮಾಡಲು ಪ್ಯಾರಿಸ್ ನಗರಕ್ಕೆ ಬಂದ. ಕೊರುಟ್ ಎಂಬ ಪ್ರಖ್ಯಾತ ಕಲಾಕೋವಿದನಲ್ಲಿ ಚಿತ್ರಕಲಾ ಅಭ್ಯಾಸ ಮಾಡಲು ಪ್ರಾರಂಭಿಸಿದ. ಕಲಾ ಶಿಕ್ಷಣವನ್ನು ಶೀಘ್ರವಾಗಿ ಮುಗಿಸಿ, ಚಿತ್ರ ರಚನೆಯಲ್ಲಿ ನಿಪುಣನಾಗಿ ತುಂಬಾ ಪ್ರಶಂಸೆ ಪಡೆದ. ಕಲೋಪಾಸನೆಯೇ ಆದರ್ಶವಾಯಿತು. 
ಈತನ ಏಕವ್ಯಕ್ತಿ ಕಲಾಪ್ರದರ್ಶನ 1859 ರಲ್ಲಿ ನಡೆಯಿತು. ಇವನು ಬರೆದ ನೈಸರ್ಗಿಕ ದೃಶ್ಯಗಳು, ಮನೆ ಮಠಗಳು ಅದರಲ್ಲೂ ಹಲವು ಬೀದಿಗಳ ಚಿತ್ರಗಳು ಬಣ್ಣ ಬೆಡಗಿನಿಂದ ಜಿಗಿದಾಡುತ್ತವೆ. ಹೀಗೆ ಬಣ್ಣ ಮಿನಿಗುವಂತೆ ಬೆಳಕು, ನೆರಳುಗಳನ್ನು ಯೋಜಿಸುವ ರಹಸ್ಯವನ್ನು ಈತ ಸಮರ್ಥ ರೀತಿಯಲ್ಲಿ ಸಾಧಿಸಿದ್ದಾನೆ. ಇವನ ಅನೇಕ ಕಲಾಕೃತಿಗಳು ರಾಷ್ಟ್ರೀಯ ಕಲಾ ಸಂಗ್ರಹದಲ್ಲಿ ಕಂಗೊಳಿಸುತ್ತವೆ.

1870 ರಲ್ಲಿ ಜರುಗಿದ ಫ್ರಾಂಕೊ-ಪ್ರಷ್ಯನ್ ಯುದ್ಧದಲ್ಲಿ ಜರ್ಮನ್ನರು ಇವನ ಅನೇಕ ಕಲಾಕೃತಿಗಳನ್ನು ಸುಟ್ಟು ಹಾಕಿದರು. ಈ ಯುದ್ಧದ ವೇಳೆಯಲ್ಲಿ 1871ರಲ್ಲಿ ಲಂಡನ್ ನಗರಕ್ಕೆ ಬಂದು ಟರ್ನರ್‍ನ ಚಿತ್ರಗಳ ಬಣ್ಣದ ಬೆಡಗಿನಿಂದ ಪ್ರಭಾವಿತನಾದ. 

ಈತನ ಪ್ರಭಾವ ಮುಂದೆ ಪಾಶ್ಚಾತ್ಯ ಚಿತ್ರಜಗತ್ತಿನಲ್ಲಿ ಕಾಣಿಸಿಕೊಂಡ ವಾನ್‍ಗೋ ಹಾಗೂ ಗಾಗಿ ಅವರಂಥ ಅದ್ಭುತ ವ್ಯಕ್ತಿಗಳ ಮೇಲೆ ವಿಶೇಷವಾಗಿ ಬಿತ್ತು.									(ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ